ಫೂರ್ಯೇ, ಫ್ರಾಂಕಾಯ್ ಮೇರೀ ಷಾರ್ಲ್
 	1772-1837. ಫ್ರೆಂಚ್ ಸಮಾಜ ತತ್ತ್ವಶಾಸ್ತ್ರಜ್ಞ. ಫ್ರಾನ್ಸಿನ ಬಿಸ್ಯಾಂಕನಿನಲ್ಲಿ ವ್ಯಾಪಾರಸ್ಥ ಕುಟುಂಬವೊಂದರಲ್ಲಿ 1772 ಏಪ್ರಿಲ್ 7ರಂದು ಜನನ. ಚಿಕ್ಕಂದಿನಲ್ಲಿಯೇ ತಂದೆಯನ್ನು ಕಳೆದುಕೊಂಡು ಮಿಲಿಟರಿ ಎಂಜಿನಿಯರನಾಗಬೇಕೆಂಬ ಹಂಬಲವಿತ್ತು. ಹಣಕಾಸಿನ ತೊಂದರೆಯಿಂದಾಗಿ ವಿದ್ಯಾಭ್ಯಾಸ ವ್ಯವಸ್ಥಿತ ರೀತಿಯಲ್ಲಿ ನಡೆಯಲಿಲ್ಲ. ವ್ಯಾಪಾರ ವೃತ್ತಿ ಕೈಗೊಂಡ. 1793ರ ಭಯಾನಕ ಆಳ್ವಿಕೆಯಲ್ಲಿ ವ್ಯಾಪಾರ ಕುಸಿದುಬಿತ್ತು. ಪಿತ್ರಾರ್ಜಿತ ಆಸ್ತಿಯೂ ಇಲ್ಲವಾಯಿತು. ಜೈಲುವಾಸ ಅನುಭವಿಸಿದ. ಎರಡು ವರ್ಷಕಾಲ ಸೈನ್ಯದಲ್ಲಿ ದುಡಿದು ಅನಾರೋಗ್ಯ ನಿಮಿತ್ತ ಬಿಡುಗಡೆ ಪಡೆದು ಜೀವನಯಾಪನೆಗಾಗಿ ದಳ್ಳಾಳಿ ವ್ಯಾಪಾರ ಕೈಗೊಂಡ. ಅಪ್ರಾಮಾಣಿಕ ವ್ಯಾಪಾರದ ಬಗ್ಗೆ ಜುಗುಪ್ಸೆಗೊಂಡು ಆ ವೃತ್ತಿ ತೊರೆದ. ನಲವತ್ತನೆಯ ವಯಸ್ಸಿನವನಿದ್ದಾಗ ತಾಯಿಯ ಕಡೆಯಿಂದ ಕೊಂಚ ಆದಾಯ ದೊರಕುವಂತಾಯಿತು. ಆಗ ಈತ ಪ್ಯಾರಿಸ್ಸಿನಲ್ಲಿ ನೆಲಸಿ ಶೇಷಾಯುಷ್ಯವನ್ನು ಲೇಖನ ಮತ್ತು ಸಂಶೋಧನೆಗಳಿಗಾಗಿ ಮುಡಿಪಿಟ್ಟ. ಅವಿವಾಹಿತನಾಗಿಯೇ ಉಳಿದು 65ನೆಯ ವಯಸ್ಸಿನಲ್ಲಿ 1837 ಅಕ್ಟೋಬರ್ 10ರಂದು ಮೃತಪಟ್ಟ.

	ಫೂರ್ಯೇ ಪ್ರಕಾರ ಮಾನವರಿಗೆ ಮುಖ್ಯವಾಗಿ ಹನ್ನೆರಡು ಕಾಮನೆಗಳಿರುತ್ತವೆ. ಅವಲೋಕನ, ಆಲಿಸುವಿಕೆ, ಘ್ರಾಣಿಸುವಿಕೆ, ಸ್ಪರ್ಶಿಸುವಿಕೆ, ಸಂವೇದನೆ, ಆಸ್ವಾದನೆ, ಗೆಳೆತನ, ಒಲುಮೆ, ಪಿತೃತ್ವ, ಸಂಧಾನ, ಪರಿವರ್ತನಾಕಾಂಕ್ಷೆ ಮತ್ತು ಒಕ್ಕೂಟಾಭಿಲಾಷೆ. ಈ ಕಾಮನೆಗಳ ಸಂಪೂರ್ಣ ಅಭಿವ್ಯಕ್ತಿಗೆ ಅನುಕೂಲಾವಕಾಶಗಳು ಲಭಿಸದಿದ್ದಲ್ಲಿ ಸಾಮಾಜಿಕ ಪಾಪಗಳು ತಲೆದೋರುತ್ತವೆ ಎಂದು ಹೇಳಿರುವ ಫೂರ್ಯೇ ಪಾಪರಹಿತ ಸಮಾಜ ಸೃಷ್ಟಿಯಾಗಬೇಕಾದರೆ ಮಾನವರ ಕಾಮನೆಗಳ ಸಂಪೂರ್ಣ ಅಭಿವ್ಯಕ್ತಿಗೆ ಅನುಕೂಲವಾಕಾಶಗಳನ್ನು ಕಲ್ಪಿಸಿಕೊಡುವಂಥ ಒಂದು ಉತ್ತಮ ಪರಿಸರ ನಿರ್ಮಾಣವಾಗಬೇಕು ಎಂದು ಅಭಿಪ್ರಾಯ ಪಟ್ಟಿದ್ದಾನೆ. ಅಂಥ ಒಂದು ಪರಿಸರ ಫಲಾಂಜುಗಳ ಮೂಲಕ ಸಿದ್ಧಿಸುತ್ತದೆ ಎಂದು ನಂಬಿದ್ದ ಫೂರ್ಯೇ ಅವುಗಳ ಸ್ಥಾಪನೆ ಮತ್ತು ಪ್ರಚಾರಕಾರ್ಯದಲ್ಲಿ ನಿರತನಾದ. ಸಹಕಾರ ಮತ್ತು ಸಹಬಾಳ್ವೆಯ ಗುರಿ ಹೊಂದಿದ್ದ ಒಂದು ಸಾಮುದಾಯಿಕ ಸಂಸ್ಥೆ ಫಲಾಂಜ್ ಪ್ರತಿಯೊಂದು ಫಲಾಂಜೂ ದೊಡ್ಡದೊಂದು ಕಟ್ಟಡದಲ್ಲಿ ಸ್ಥಾಪಿತವಾಗಿರುತ್ತದೆ. ಅದರಲ್ಲಿ 1500ರಿಂದ 2000 ಸಾವಿರ ಜನರ ಅಥವಾ 400 ಕುಟುಂಬಗಳ ವಾಸ್ತವ್ಯಕ್ಕೆ ಅನುಕೂಲಗಳಿರುತ್ತವೆ. ಪ್ರತಿ ಕುಟುಂಬವೂ ಒಂದೇ ಕಟ್ಟಡದಲ್ಲಿ ಪ್ರತ್ಯೇಕವಾಗಿ ವಾಸಿಸುತ್ತವೆ. ಆದರೆ ಸಂಗೀತ ನೃತ್ಯ ಮತ್ತು ಭೋಜನಗಳಿಗೆ ಎಲ್ಲರೂ ಒಂದುಗೂಡಬೇಕು ಎಂಬುದು ನಿಯಮ.

	ಫಲಾಂಜುಗಳಿಂದ ಅನೇಕ ಪ್ರಯೋಜನಗಳಾಗುವುವೆಂದು ಫೂರ್ಯೇ ಭಾವಿಸಿದ್ದ. ಮಿತವ್ಯಯ ಕೈಗೂಡಿ ಎಲ್ಲರಿಗೂ ಉತ್ತಮ ಸೇವಾ ಸೌಲಭ್ಯಗಳು ದೊರಕುತ್ತವೆ. ಸಹಕಾರದ ಫಲವಾಗಿ ಪರಸ್ಪರ ತಿಳಿವಳಿಕೆಗೆ ಅನುವು ದೊರೆತು ಸದಸ್ಯರಲ್ಲಿ ಸಹಾನುಭೂತಿ ಮತ್ತು ಸೌಹಾರ್ದಗಳು ಮೊಳೆಯುತ್ತವೆ. ಸಹಭೋಜನ ಪದ್ಧತಿಯಿಂದಾಗಿ ಸೇವಕರ ಸಮಸ್ಯೆ ಉದ್ಭವಿಸುವುದಿಲ್ಲ. ಆದರೆ ಸಾಮಾಜಿಕ ಮತ್ತು ನೈತಿಕ ಮೌಲ್ಯಗಳಿಗೆ ಸಂಬಂಧಿಸಿದಂತೆ ಫಲಾಂಜುಗಳು ಅನೇಕ ಸಮಸ್ಯೆಗಳಿಗೆ ಎಡೆಗೊಡುವುವೆಂಬ ಟೀಕೆ ಇಲ್ಲದಿರಲಿಲ್ಲ. ಬಡವ-ಬಲ್ಲಿದರ ಒಡನಾಟದಿಂದ ಬಡವರಲ್ಲಿ ತಿಳಿವಳಿಕೆ ಮೂಡಿ ಅವರ ಸ್ಥಿತಿಗಳು ಸುಧಾರಿಸುತ್ತವೆ ಎಂಬ ವಿಚಾರವೂ ವಿವಾದಾಸ್ಪದವಾಗಿತ್ತು. 

	ಫಲಾಂಜುಗಳನ್ನು ಸಹಕಾರಿ ಹೋಟಲುಗಳಿಗೆ ಹೋಲಿಸಬಹುದು. ಆದರೆ ಫಲಾಂಜುಗಳಿಗೂ ಸಹಕಾರ ಸಂಘಗಳಿಗೂ ಕೆಲವು ವ್ಯತ್ಯಾಸಗಳಿದ್ದುವು. ಸಹಕಾರಿ ಸಂಘಗಳು ಉತ್ಪಾದಕರ ಸಂಘಗಳಾಗಿರಬಹುದು ಅಥವಾ ಗ್ರಾಹಕರ ಸಂಘಗಳಾಗಿರಬಹುದು. ಆದರೆ ಫಲಾಂಜ್ ಉತ್ಪಾದನೆ ಮತ್ತು ಅನುಭೋಗದ ಚಟುವಟಿಕೆಗಳೆರಡನ್ನು ಕೈಗೊಳ್ಳುತ್ತದೆಂಬುದು ಫೂರ್ಯೇ ಭಾವನೆ. ಅದೊಂದು ಚಿಕ್ಕ ಸ್ವಾವಲಂಬಿ ಜಗತ್ತು. ಸುತ್ತಮುತ್ತ ಸುಮಾರು 400 ಎಕರೆಗಳಷ್ಟು ಕೃಷಿಯೋಗ್ಯ ಭೂ ಪ್ರದೇಶವೂ ಅದಕ್ಕೆ ಇರುತ್ತದೆ. ಅದರಲ್ಲಿ ಸದಸ್ಯರ ಆವಶ್ಯಕತೆಗಳಿಗೆ ಅನುಸಾರವಾಗಿ ಎಲ್ಲ ಆಹಾರ ಪದಾರ್ಥಗಳನ್ನು ಸ್ವತಃ ಸದಸ್ಯರೇ ಬೆಳೆದುಕೊಳ್ಳಬೇಕಾಗುವುದು. ಕೃಷಿಉಪಕರಣಗಳು, ಬಟ್ಟೆ ಮುಂತಾದವನ್ನೂ ಅವರೇ ತಯಾರಿಸಿಕೊಳ್ಳಬೇಕು. ಹೆಚ್ಚುವರಿ ಅಥವಾ ಕಡಿಮೆ ಬಿದ್ದ ಸರಕುಗಳನ್ನು ಇತರ ಫಲಾಂಜುಗಳೊಂದಿಗೆ ವಿನಿಮಯದಿಂದ ಪಡೆದುಕೊಳ್ಳಬೇಕು. ಫಲಾಂಜ್ ಸ್ವಲ್ಪಮಟ್ಟಿಗೆ ಕೂಡು ಬಂಡವಾಳ ಸಂಸ್ಥೆಯಂತೆ, ಸದಸ್ಯರ ಪೈಕಿ ದಕ್ಷರೆಂದು ಚುನಾಯಿತರಾದ ವ್ಯಕ್ತಿಗಳು ನೋಡಿಕೊಳ್ಳಬೇಕು. ಸದಸ್ಯರು ಬಂಡವಾಳ ಹಾಕಿದವರಿದ್ದಿರಬಹುದು ಅಥವಾ ಶ್ರಮಿಕರಾಗಿರಬಹುದು. ಸರ್ವರೂ ಸಮಾನರು ಎಂಬ ಆದರ್ಶಕ್ಕೆ ಮಣಿದು ಸಹಪಾಲುದಾರರಂತೆ ವ್ಯವಹರಿಸಬೇಕು. 

	ಶ್ರಮ ಮತ್ತು ಅದರ ಸಂಭಾವನೆಯನ್ನು ಕುರಿತಂತೆ ಫೂರ್ಯೇಯ ಚಿಂತನೆಗಳು ಸತ್ತ್ವಯುತವಾದವು. ದುಡಿಮೆಯನ್ನು ಅವಶ್ಯಕ ದುಡಿಮೆ, ಉಪಯುಕ್ತ ದುಡಿಮೆ ಮತ್ತು ಅಪೇಕ್ಷಿಸಿ ಕೈಗೊಳ್ಳುವ ದುಡಿಮೆ ಎಂದು ಫೂರ್ಯೇ ವರ್ಗೀಕರಿಸಿದ್ದಾನೆ. ಮೊದಲನೆಯ ಎರಡು ವರ್ಗಗಳಿಗೆ ಸೇರಿದ ಶ್ರಮಿಕರಿಗೆ ಅತ್ಯಂತ ಕಡಿಮೆ ಸಂಭಾವನೆ ಸಲ್ಲಬೇಕೆಂಬುದೂ ಮೂರನೆಯ ವರ್ಗದ ಶ್ರಮಿಕರಿಗೆ ಅತ್ಯಂತ ಕಡಿಮೆ ಸಂಭಾವನೆ ಕೊಡಬೇಕೆಂಬುದೂ ಅವನ ಸೂಚನೆ. ಅಲ್ಲದೇ ಒಬ್ಬ ವ್ಯಕ್ತಿ 8ನೆಯ ವರ್ಷದಿಂದ 28ನೆಯ ವರ್ಷದತನಕ ಅಂದರೆ 20ವರ್ಷ ಪರ್ಯಂತ ದುಡಿದಿದ್ದಾದರೆ ಆತನ ಉಳಿದ ಜೀವನವನ್ನು ವಿರಾಮವಾಗಿ ಕಳೆಯ ಬಹುದು ಎಂಬುದು ಅವನ ಅಭಿಪ್ರಾಯ. ಶ್ರಮಿಕರಿಗೆ ಶ್ರಮ ಅವರ ಜುಗುಪ್ಸೆ ಮತ್ತು ಅಸಮಾಧಾನಗಳನ್ನು ಹೋಗಲಾಡಿಸುವಷ್ಟರ ಮಟ್ಟಿಗೆ ಆಕರ್ಷಕವಾಗಬೇಕು, ಹಿತಕರವಾಗಬೇಕು ಎಂಬುದು ಫೂರ್ಯೇಯ ಅಭಿಲಾಷೆ. ಅವನ ಪ್ರಕಾರ ಶ್ರಮ ಅಹಿತಕರವಾಗುವುದು ಅದು ಮಿತಿಮೀರಿದಾಗ ಮಾತ್ರ. ಈ ದೃಪ್ಷಿಯಿಂದಲೇ ಫಲಾಂಜಿನಲ್ಲಿ ಮಿತಿಮೀರಿ ದುಡಿಯುವುದಕ್ಕೆ ಪ್ರೋತ್ಸಾಹವಿಲ್ಲ. ಶ್ರಮಿಕರು ತಮ್ಮ ಅಭಿರುಚಿಗೆ ಒಗ್ಗುವಂಥ ಯಾವ ಕೆಲಸವನ್ನಾದರೂ ಯಾವಾಗಬೇಕಾದರೂ ಆರಿಸಿಕೊಳ್ಳುವ ಸ್ವಾತಂತ್ರ್ಯ ಇರಬೇಕೆಂದು ಫೂರ್ಯೇ ವಾದಿಸಿದ. ಉತ್ಪಾದನೆಯಿಂದ ದೊರೆತ ಲಾಭವನ್ನು ಸದಸ್ಯರ ಬಂಡವಾಳ, ಶ್ರಮ ಮತ್ತು ಸಂಘಟನ ಚಾತುರ್ಯಗಳನ್ನು ಗಣನೆಗೆ ತೆಗೆದುಕೊಂಡು ಶ್ರಮಕ್ಕೆ 5/12 ಬಂಡವಾಳಕ್ಕೆ 4/12 ಮತ್ತು ಸಂಘಟನಾ ಚಾತುರ್ಯಕ್ಕೆ 3/12 ಭಾಗಗಳನ್ನು ಹಂಚಬೇಕೆಂದು ಫೂರ್ಯೇಯ ಸೂತ್ರ. ಶ್ರಮಿಕರಿಗೆ ಕೂಲಿಕೊಡುವ ಪದ್ಧತಿ ಇದ್ದಿರಲಿಲ್ಲ. ಪ್ರತಿಯೊಬ್ಬ ಶ್ರಮಿಕನಿಗೂ ಕನಿಷ್ಟ ಜೀವನಾಧಾರದ ಭರವಸೆ ಇರುತ್ತಿತ್ತು. ಹೀಗೆ ಸಮಗ್ರ ಸಹಕಾರ ಮತ್ತು ಆಕರ್ಷಕ ಶ್ರಮ - ಇವು ಫಲಾಂಜಿನ ಎರಡು ಮುಖ್ಯ ಲಕ್ಷಣಗಳು. 

	ಮನೆಯಲ್ಲಿ ಆಳಿನಂತೆ ದುಡಿಯುತ್ತಿದ್ದ ಮಹಿಳೆಯ ಬಗ್ಗೆ ಅವನಿಗೆ ಅನುಕಂಪ. ಮಹಿಳೆಯ ಸ್ವಾತಂತ್ರ್ಯಕ್ಕೆ ಅಡ್ಡಿಯಲ್ಲದ ಮುಕ್ತವಾತಾವರಣ ನಿರ್ಮಾಣವಾಗಬೇಕೆಂದು ಬಯಸಿದ. ಸಂಪ್ರದಾಯಬದ್ದ ವಿವಾಹಕ್ಕೆ ವಿರೋಧಿ ಆಗಿದ್ದ. ದೊಡ್ಡ ದೊಡ್ಡ ನಗರಗಳನ್ನು ಚದುರಿಸಿ ಅಲ್ಲಿಯ ಜನರನ್ನು ಫಲಾಂಜುಗಳಲ್ಲಿ ವಾಸಿಸುವಂತೆ ಆಕರ್ಷಿಸಬೇಕು ಮತ್ತು ಆ ಮೂಲಕ ಸಂಯೋಜಿಕ ಗ್ರಾಮೀಣ ಅರ್ಥ ವ್ಯವಸ್ಥೆಯನ್ನು ಸ್ಥಾಪಿಸಬೇಕು. ಫಲಾಂಜುಗಳನ್ನು ಸುಂದರ ಗಿರಿಕಾನನಗಳ ನಡುವೆ ಹರಿಯುವ ನದಿಗಳ ದಂಡೆಗಳ ಮೇಲೆ ಸ್ಥಾಪಿಸಬೇಕೆಂಬುದು ಫೂರ್ಯೇಯ ಆಶಯ. ನಗರೀಕರಣದಿಂದ ಉದ್ಭವಿಸುವ ವಸತಿ ಸಮಸ್ಯೆ ಜನಸಂದಣಿ ಮುಂತಾದ ಸಮಸ್ಯೆಗಳ ನಿವಾರಣೆಯಾಗಿ ಆರೋಗ್ಯದಾಯಕವಾದ ಸಮುದಾಯಗಳು ಸೃಷ್ಡಿಯಾಗುತ್ತವೆ ಎಂದು ಫೂರ್ಯೇ ಭಾವಿಸಿದ್ದ. 

	ಫೂರ್ಯೇಯ ವಿಚಾರಗಳಿಗೆ ಅವನ ಜೀವಿತಕಾಲದಲ್ಲಿ ಮನ್ನಣೆ ಸಿಗಲಿಲ್ಲ. ಆದರೆ ಅವನು ಮೃತಪಟ್ಟ ಹಲವು ವರ್ಷಗಳ ಅನಂತರ ಅನೇಕ ಜನ ಅವು ಮೌಲ್ಯಯುತವಾದವು ಎಂಬುದನ್ನು ಗುರುತಿಸಿದರು. ಫೂರ್ಯೇಸಮ್ (ಫೂರ್ಯೇವಾದ) ಎಂದೇ ಅವು ಫಾನ್ಸ್, ಇಂಗ್ಲೆಂಡ್ ಮತ್ತು ಅಮೆರಿಕ ದೇಶಗಳಲ್ಲಿ ಜನಪ್ರಿಯವಾದವು. ವಿಕ್ಟರ್ ಕೋಸಿಡೇರಾ (ಫ್ರಾನ್ಯ್), ಹ್ಯೂಡೋಹರ್ಟಿ (ಇಂಗ್ಲೆಂಡ್) ಮತ್ತು ಆಲ್ಬರ್ಟ್ ಬ್ರಿಸ್ಪೇನ್ (ಅಮೆರಿಕ) ಮುಂತಾದವರು ಫೂರ್ಯೇಯ ವಿಚಾರಗಳಿಂದ ಆಕರ್ಷಿತರಾದರು. ಅವರೆಲ್ಲರು ಪ್ರಯತ್ನ ಹಾಗೂ ಪ್ರಚಾರದ ಫಲವಾಗಿ ಅನೇಕ ಫಲಾಂಜುಗಳು ಸ್ಥಾಪಿತವಾದುವು. 1840ರ ದಶಕದಲ್ಲಿ ಅಮೆರಿಕದಲ್ಲೇ ಸುಮಾರು 20 ಫಲಾಂಜುಗಳು ಸ್ಥಾಪಿತವಾದವೆಂದು ಹೇಳಲಾಗಿದೆ. ಆದರೆ ಯಾವ ಫಲಾಂಜೂ ಬಹಳಕಾಲ ಉಳಿಯಲಿಲ್ಲ. ಕಾರಣ ಬೆಲ್ ಎಂಬಾತ ಅಭಿಪ್ರಾಯಪಟ್ಟಿರುವಂತೆ, ಆಗಿನ ಕಾಲಕ್ಕೆ ಫೂರ್ಯೇಯ ವಿಚಾರಗಳು ಆರ್ಥಿಕ ಮೌಲ್ಯವಲ್ಲದ ಮತ್ತು ಪ್ರಾಯೋಗೀಕರಣಕ್ಕೆ ಒಗ್ಗದಿರುವ ಕಾಲ್ಪನಿಕ ವಿಚಾರಗಳಾಗಿದ್ದುವು. ಹೀಗಾಗಿ ಫೂರ್ಯೇ ಪ್ರಾರಂಭಿಸಿದ ಚಳವಳಿ ಆರಂಭದ ದೆಶೆಯಲ್ಲೇ ಮುರಿದುಬಿತ್ತು. ಪ್ಯಾರಿಸ್ಸನ್ನು ಕೇಂದ್ರವಾಗಿರಿಸಿಕೊಂಡು ಪ್ರಪಂಚದಾದ್ಯಂತ ಫಲಾಂಜುಗಳನ್ನು ಸ್ಥಾಪಿಸಬೇಕು ಎಂಬ ಆತನ ಕನಸು ಕನಸಾಗಿಯೇ ಉಳಿಯಿತು. ಸೋವಿಯೆತ್ ಒಕ್ಕೂಟ ಮತ್ತು ಚೀನಾದಲ್ಲಿ ಸಮಾಜವಾದಿ ಸಮುದಾಯಗಳನ್ನು ಫಲಾಂಜುಗಳಿಗೆ ಹೋಲಿಸಬಹುದಾಗಿದ್ದರೂ ಅವುಗಳಲ್ಲಿ ಒಂದು ಮೂಲಭೂತವಾದ ವ್ಯತ್ಯಾಸವಿದೆ. ಫೂರ್ಯೇ ಭೂರಿ ಉತ್ಪಾದನೆಯನ್ನು ವಿರೋಧಿಸುತ್ತಿದ್ದ ಸ್ವಯಂಸಾಹಚರ್ಯ ಪದ್ಧತಿಗೆ ಅವನು ಆದ್ಯತೆ ನೀಡಿದ್ದ. ಸಮಾಜವಾದಿ ಸಮುದಾಯಗಳು ಕೇಂದ್ರೀಯ ನಿಯಂತ್ರಣಕ್ಕೆ ಒಳಪಟ್ಟಿದ್ದು ಭೂರಿ ಉತ್ಪಾದನೆಗೆ ಹೆಸರಾಗಿವೆ. 

	ಫೂರ್ಯೇಯ ವಿಧಾನದಲ್ಲಿ ಅಡಕವಾಗಿರುವ ಅನೇಕ ಅಂಶಗಳು ಮುಖ್ಯವಾಗಿ ಆಧುನಿಕ ಕೈಗಾರಿಕಾ ಪದ್ಧತಿಯನ್ನು ಕುರಿತಾದ ಅವನ ವಿಮರ್ಶಾತ್ಮಕ ಹೇಳಿಕೆಗಳೂ ಇಂದಿಗೂ ಪ್ರಸ್ತುತವೆನಿಸಿವೆ. ಸಹಕಾರಿ ಉತ್ಪಾದನೆಯ ಮಹತ್ತ್ವವನ್ನು ಪ್ರಪ್ರಥಮವಾಗಿ ಗುರುತಿಸಿದ ಸಮಾಜಚಿಂತಕರಲ್ಲಿ ಫೂರ್ಯೇಯೂ ಒಬ್ಬ. ಸಹಬಾಳ್ವೆ ನೂತನವಾದ ಹಾಗೂ ಉದಾತ್ತವಾದ ಒಂದು ಸಾಮಾಜಿಕ ವ್ಯವಸ್ಥೆಗೆ ದಾರಿಮಾಡಿ ಕೊಡುತ್ತದೆ ಎಂದು ನಂಬಿದ್ದ ಫೂರ್ಯೇಫಲಾಂಜ್ ಮೂಲಕ ತೊಟ್ಟಿಲಿನಿಂದ ಸಮಾಧಿಯವರೆಗೆ ಸುಭದ್ರತೆಯನ್ನು ದೊರಕಿಸಿಕೊಡಲು ಪ್ರಯತ್ನ ಪಟ್ಟ. ಶ್ರಮಿಕರ ಅಭಿರುಚಿ ಮತ್ತು ದಕ್ಷತೆಗಳನ್ನು ಅವಲಂಬಿಸಿರುವ ಇವನ ಶ್ರಮವಿಭಜನೆಯ ವಿಧಾನ ಸಂಪನ್ಮೂಲಗಳ ಹಂಚಿಕೆ ಸಮಸ್ಯೆಯ ನಿವಾರಣೆಗೆ ಸಹಾಯಕವಾಗಿದೆ. ಇಂದಿನ ನಮ್ಮ ಸಹಕಾರ ಚಳವಳಿ ಫೂರ್ಯೇಗೆ ಒಂದು ಜೀವಂತ ಸ್ಮಾರಕವಾಗಿದೆ ಎನ್ನಬಹುದು.		
	(ಕೆ.ಜಿ.ಒ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ